ವಾಲಿಬಾಲ್
	ಅಮೆರಿಕ ಮೂಲದ ಕ್ರೀಡೆ. ಬಯಲಲ್ಲೂ ಕಡಲತಡಿಯಲ್ಲೂ ಇದನ್ನು ಆಡುತ್ತಾರೆ; ಒಳಾಂಗಣದಲ್ಲೂ ಆಡಬಹುದು. ಮಿಂಟಾ ಸೆಟ್ ಎಂಬುದು ಇದರ ಮೂಲ ಹೆಸರು. ಬಲೆಯ (ನೆಟ್) ಇಕ್ಕೆಲಗಳಲ್ಲಿ ಚೆಂಡು ವಾಲಿಯಾಗುವುದರಿಂದ ವಾಲಿಬಾಲ್ ಎನಿಸಿಕೊಂಡಿತು. 1885ರಲ್ಲಿ ವಿಲಿಯಂ ಜಿ. ಮಾರ್ಗನ್ ಎಂಬಾತ ಈ ಆಟವನ್ನೂ ನಿಯಮಗಳನ್ನೂ ರೂಪಿಸಿದ. 1947ರಲ್ಲಿ ವಿಶ್ವ ವಾಲಿಬಾಲ್ ಫೆಡರೇಷನ್ ರಚಿತವಾಗಿ 1949ರಲ್ಲಿ ಮೊದಲ ವಿಶ್ವಕಪ್ ಪಂದ್ಯಾವಳಿ ನಡೆಯಿತು. 1964ರ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಇದು ಮೊದಲ ಬಾರಿಗೆ ಸ್ಥಾನಪಡೆಯಿತು. 1902ರಲ್ಲಿ ಡಾಗ್ರೇ ಎಂಬಾತ ಈ ಆಟವನ್ನು ಭಾರತಕ್ಕೆ ತಂದ. 1950ರಲ್ಲಿ ಭಾರತೀಯ ವಾಲಿಬಾಲ್ ಫೆಡರೇಷನ್ ರಚನೆಯಾಯಿತು. ಕಡಲದಂಡೆಯ ಮರಳಲ್ಲಿ ಆಡುವ ಆಟಕ್ಕೆ ಬೀಚ್‍ವಾಲಿಬಾಲ್ ಎಂದು ಹೆಸರು. ಹೆಚ್ಚಾಗಿ ಮಹಿಳೆಯರು ಈ ಆಟವನ್ನು ಆಡುವುದಿದೆ. 

ಚಿತ್ರ-ವಾಲಿಬಾಲ್-ಆಟದ-ಕಣ

	ವಾಲಿಬಾಲ್ ಮೈದಾನ ಸರಳವಾದುದು. 18 ಮೀx9 ಮೀ ಅಳತೆಯ ಆವರಣದ ಮಧ್ಯೆ 9 ಮೀಗೆ ಮಧ್ಯಗೆರೆ ಎಳೆಯುವರು. ಇದರ ಎರಡೂ ಬದಿಗಳಿಗೆ 3 ಮೀ ಅಂತರದಲ್ಲಿ ಆಕ್ರಮಣರೇಖೆ ಇರುತ್ತದೆ. ಮಧ್ಯರೇಖೆಗೆ ಸರಿಯಾಗಿ ಆಚೀಚೆ, ಸೀಮಾರೇಖೆಯಿಂದ 1.5 ಮೀ ದೂರದಲ್ಲಿ ಸಣ್ಣಗಾತ್ರದ ದುಂಡನೆಯ ಎರಡು ಕಂಬಗಳನ್ನು ನೆಲದಿಂದ 2.55 ಮೀ ಎತ್ತರವಿರುವಂತೆ ನೆಡಲಾಗುವುದು. ಈ ಕಂಬಗಳಿಗೆ ನಡುವಿನ ಗೆರೆಗೆ ಸರಿಯಾಗಿ ಲಂಬವಾಗುವಂತೆ ನೆಟ್ ಕಟ್ಟಲಾಗುವುದು. ನೆಟ್‍ನ ಉದ್ದ 9.5 ಮೀ, ಅಗಲ 1 ಮೀ. ನೆಟ್‍ನ ಮೇಲಂಚು ತಂತಿಯನ್ನು ಮುಚ್ಚುವ 5 ಸೆ.ಮೀ ಅಗಲದ ಕ್ಯಾನ್‍ವಾಸ್‍ಪಟ್ಟಿಯನ್ನು ಹೊಂದಿರುತ್ತದೆ. ನೆಟ್ ಬಿಗಿಯಾಗುವಂತೆ ತಂತಿಯ ಎರಡೂ ತುದಿಗಳನ್ನು ಕಂಬಗಳಿಗೆ ಎಳೆದು ಕಟ್ಟಲಾಗುವುದು. ನೆಟ್‍ನ ರಂಧ್ರಗಳು 1x1 ಸೆಂಮೀ ಅಳತೆಯವು. ನೆಟ್‍ನ ಕೆಳ ಅಂಚಿಗೆ ಬಲವಾದ ಹಗ್ಗವಿದ್ದು ಇದರ ತುದಿಗಳನ್ನು ಕಂಬಗಳಿಗೆ ಎಳೆದು ಕಟ್ಟಲಾಗುವುದು. ನೆಟ್‍ನ ಎರಡೂ ಅಂಚುಗಳಲ್ಲಿ 10 ಸೆಂಮೀ ದಪ್ಪದ, 1.8 ಮೀ ಉದ್ದದ ಆಂಟೆನ್ನಗಳನ್ನೂ ಸಿಕ್ಕಿಸಲಾಗುವುದು. ಆಂಟೆನ್ನ ಸ್ಥಿತಿಸ್ಥಾಪಕ ಗುಣ ಹೊಂದಿದ-ಸಾಮಾನ್ಯ ವಾಗಿ ಫೈಬರ್ ಗಾಜಿನ ಕಡ್ಡಿ. ಈ ಆಂಟೆನ್ನಗಳ ಮೇಲ್ತುದಿಗಳಿಗೆ 80 ಸೆಂಮೀ ಉದ್ದಕ್ಕೆ ಕೆಂಪು ಬಣ್ಣವನ್ನು ಬಳಿಯಲಾಗುವುದು. 
	ನೆಟ್‍ನ ಎತ್ತರ (ನೆಲದಿಂದ ಮೇಲಂಚಿನವರೆಗೆ) ಪುರುಷರಿಗೆ 2.43 ಮೀ ಮತ್ತು ಮಹಿಳೆಯರಿಗೆ 2.24 ಮೀ. ಚೆಂಡು ತಿಳಿವರ್ಣದ ಚರ್ಮ ಅಥವಾ ಸಿಂತೆಟಿಕ್ ವಸ್ತುವಿನಿಂದ ತಯಾರಾಗಿದ್ದು ಸುತ್ತಳತೆ 65-67 ಸೆಂಮೀ ಹಾಗೂ ತೂಕ 260-280 ಗ್ರಾಂ ಇರುತ್ತದೆ. ಚೆಂಡಿನ ಒಳಗಿನ ಗಾಳಿಯ ಒತ್ತಡ 0.40ರಿಂದ 0.45 ಕೆಜಿ ಇರುತ್ತದೆ. 
	ಅಂಕಣದಲ್ಲಿ 3 ವಲಯಗಳಿರುತ್ತವೆ: ಮುಕ್ತವಲಯ, ಬದಲಾವಣೆ ವಲಯ ಮತ್ತು ಸರ್ವಿಸ್‍ವಲಯ. ಸರ್ವಿಸ್‍ವಲಯ ಪ್ರತಿ ಅಂಕಣದ ಕೊನೆಯಗೆರೆಯ ಆಚೆ 9 ಮೀ ಅಗಲದ್ದಾಗಿರುತ್ತದೆ. 
	ಪ್ರತಿ ತಂಡದಲ್ಲಿ 12 ಆಟಗಾರರಿರುತ್ತಾರೆ. ಇದರಲ್ಲಿ 6 ಜನ ಆಡುವವರು ಮತ್ತು 6 ಜನ ಬದಲಿ ಆಟಗಾರರು. ಈ 6 ಜನರಲ್ಲಿ ಒಬ್ಬ ತಂಡದ ನಾಯಕ. ಪ್ರತಿ ಆಟಗಾರನಿಗೂ ಒಬ್ಬ ಬದಲಿ ಆಟಗಾರನಿರುತ್ತಾನೆ. ಪ್ರತಿ ಸೆಟ್‍ಗೆ ಆರು ಬದಲಿಕೆಯ ಅವಕಾಶವಿರುತ್ತದೆ. ಒಬ್ಬ ಆಟಗಾರನನ್ನು ಎರಡುಸಾರಿ ಬದಲಿಸಬಹುದು. 
	ತಂಡದ 6 ಆಟಗಾರರಿಗೂ ಸ್ಥಾನಗಳಿದ್ದು ಸರ್ವಿಸ್‍ಮಾಡುವ ತಂಡ ಪ್ರತಿ ಸರ್ವಿಸ್‍ಗೂ ತನ್ನ ತಂಡದ ಸದಸ್ಯರ ಸ್ಥಾನಗಳನ್ನು ಗಡಿಯಾರ ಚಲನೆಯ ರೀತಿ ಬದಲಿಸುತ್ತಿರಬೇಕು. ತಂಡವೊಂದು 25 ಅಂಕಗಳನ್ನು ಪಡೆಯುವವರೆಗಿನ ಆಟ ಒಂದು ಸೆಟ್ ಅಥವಾ ಒಂದು ಗೇಮ್ ಎನಿಸುತ್ತದೆ. ಎರಡೂ ತಂಡಗಳು 24-24ರಲ್ಲಿ ನಿಂತರೆ ಅವರಲ್ಲಿ ಮೊದಲು ಸತತವಾಗಿ 2 ಅಂಕ ಮುಂದೆ ಚಲಿಸುವವರು ಗೆಲ್ಲುತ್ತಾರೆ. ಒಂದು ಮ್ಯಾಚ್‍ಗೆ 3 ಸೆಟ್ ಅಥವಾ 5 ಸೆಟ್‍ಗಳಿರುತ್ತವೆ. 3ರಲ್ಲಿ 2 ಅಥವಾ 5ರಲ್ಲಿ 3 ಸೆಟ್ ಗೆದ್ದ ತಂಡ ಜಯಶಾಲಿಯಾಗುತ್ತದೆ. ಒಂದುವೇಳೆ ತಂಡಗಳ ಸ್ಕೋರ್ 2-2 ಸೆಟ್‍ಗಳಾದರೆ ಕೊನೆಯ ಸೆಟ್‍ಗೆ 15 ಅಂಕಗಳಿಗೆ ಒಂದುಸೆಟ್ ಎಂದು ಪರಿಗಣಿಸಲಾಗುತ್ತದೆ. 15 ಅಂಕಗಳ ಇಂಥ ಸೆಟ್‍ನಲ್ಲಿ 8 ಅಂಕಗಳಾದೊಡನೆ ತಂಡಗಳು ಅಂಕಣ ಬದಲಿಸಬೇಕು. 
	ಟಾಸ್‍ಗೆದ್ದ ತಂಡ ಅಂಕಣವನ್ನು ಅಥವಾ ಸರ್ವಿಸನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರತಿ ಸೆಟ್‍ನ ಅನಂತರವೂ ತಂಡಗಳು ಅಂಕಣ ಗಳನ್ನು ಬದಲಿಸಿಕೊಳ್ಳಬೇಕು. ಒಂದು ಸೆಟ್‍ನಲ್ಲಿ ಪ್ರತಿ ತಂಡಕ್ಕೆ ಎರಡು ಬಾರಿ ವಿರಾಮ ಪಡೆಯುವ ಅವಕಾಶವಿರುತ್ತದೆ. ಪ್ರತಿ ವಿರಾಮದ ಅವಧಿ 1/2 ನಿಮಿಷ. ಪ್ರತಿ ಸೆಟ್‍ನ ಅನಂತರ 2 ನಿಮಿಷ ವಿಶ್ರಾಂತಿ. ಕೊನೆಯ ಸೆಟ್‍ನ ಆರಂಭಕ್ಕೆ 5 ನಿಮಿಷ ವಿಶ್ರಾಂತಿ ನೀಡಲಾಗುತ್ತದೆ. 
	ಸರ್ವಿಸ್ ಮಾಡುವ ತಂಡದ ಒಬ್ಬ ಆಟಗಾರ ಅಂತಿಮಗೆರೆಯ ಆಚೆ ನಿಂತು ಚೆಂಡನ್ನು ಮೇಲೆಸೆದು ಸರ್ವಿಸ್‍ಮಾಡಬೇಕು. ನೆಟ್ ದಾಟಿದ ಈ ಚೆಂಡನ್ನು ಎದುರಾಳಿ ತಂಡದ ಆಟಗಾರ ತಡೆದು ತನ್ನ ಸಂಗಾತಿಯೊಬ್ಬ ಮತ್ತೆ ಅದನ್ನು ನೆಟ್ ದಾಟಿ ಎದುರುತಂಡದ ಕಡೆಗೆ ಕಳಿಸಲು ನೆರವಾಗುವಂತೆ ಮೇಲೆ ಚಿಮ್ಮುತ್ತಾನೆ. ಎರಡನೆಯ ಆಟಗಾರ ಅದನ್ನು ತಾನೇ ಎದುರಾಳಿಯ ಅಂಕಣಕ್ಕೆ ಕಳಿಸಬಹುದು ಅಥವಾ ಹಾಗೆ ಮಾಡಲು ಮತ್ತೊಬ್ಬ ಆಟಗಾರನಿಗೆ ನೆರವಾಗುವಂತೆ ಚೆಂಡನ್ನು ಮೇಲೆತ್ತಬಹುದು. ಹೀಗೆ ಒಟ್ಟಾರೆ 3 ಅವಕಾಶಗಳಲ್ಲಿ ಚೆಂಡನ್ನು ವಾಪಸು ಕಳಿಸಬೇಕು. ಈ ಮೂರೂ ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದು ಅನಿವಾರ್ಯವಲ್ಲ. ಆದರೆ ಸರ್ವಿಸ್‍ನಲ್ಲಿ ಜೋರಾಗಿ ಬರುವ ಚೆಂಡನ್ನು ನಯವಾಗಿ ಸ್ವೀಕರಿಸಿ, ಇನ್ನೊಬ್ಬನತ್ತ ಹಾರಿಸಿ, ಆತ ನೆಟ್‍ಬಳಿಗೆ ಷಾಟ್ ಹೊಡೆಯಲು ಹೊಂದಿಕೆಯಾಗುವಂತೆ, ಅದನ್ನು ದಾಟಿಸುವಂತೆ ನೆರವಾಗುತ್ತಾನೆ. ಹೀಗೆ ಪಾಸ್‍ಮಾಡಲಾದ ಚೆಂಡನ್ನು ತಾನು ಅಥವಾ ಇನ್ನೊಬ್ಬ ಆಟಗಾರ ಬಿರುಸಿನ ಹೊಡೆತದಿಂದ ನೆಟ್‍ದಾಟಿಸಿ ಸರ್ವ್‍ಮಾಡಿದ ತಂಡ ತತ್ತರಿಸುವಂತೆ ಮಾಡುವುದು ಈ ಆಟದ ತಂತ್ರ. ಹೀಗೆ ಮತ್ತೆ ಸರ್ವ್‍ಮಾಡಿದ ತಂಡಕ್ಕೆ ವಾಪಸುಬಂದ ಚೆಂಡನ್ನು ಇದೇ ತಂತ್ರದಿಂದ ಇನ್ನೊಂದು ಅಂಕಣಕ್ಕೆ ಕಳಿಸುವುದು ಮುಂದುವರಿಯುತ್ತದೆ. ಚೆಂಡು ಅಂಕಣದಿಂದಾಚೆ ಬಿದ್ದರೆ (ಬೀಳುವ ಚೆಂಡನ್ನು ಆಟಗಾರರು ಮುಟ್ಟಿರಬಾರದು), ಮೂರಕ್ಕಿಂತ ಹೆಚ್ಚು ಅವಕಾಶಗಳನ್ನು ಒಂದೇ ತಂಡದ ಆಟಗಾರರು ಆಡಿದರೆ, ಚೆಂಡು ಬುಗುರಿಯಂತೆ ತಿರುಗಿದರೆ, ಎದುರಾಳಿ ತಂಡಕ್ಕೆ ಒಂದು ಪಾಯಿಂಟ್ ದೊರೆಯುತ್ತದೆ. ನೆಟ್‍ದಾಟಿಸುವ, ದಾಟಿಬರುವ ಚೆಂಡನ್ನು ನೆಟ್‍ಬಳಿಯೇ ತಡೆಗಟ್ಟುವ (ಬ್ಲಾಕ್) ಪ್ರಕ್ರಿಯೆಯಲ್ಲಾದ ಸ್ಪರ್ಶವನ್ನು ವಿನಾಯ್ತಿಯೆಂದು ಪರಿಗಣಿಸಲಾಗುತ್ತದೆ. ಚೆಂಡನ್ನು ಒಬ್ಬನೇ 2 ಬಾರಿ ಸ್ಪರ್ಶಿಸುವಂತಿಲ್ಲ. ಆಟಗಾರರು ನೆಟ್ ಮುಟ್ಟುವಂತಿಲ್ಲ. ಸರ್ವಿಸ್ ಮಾಡಿದ ಚೆಂಡು ನೆಟ್‍ತಾಗಬಾರದು. ಸರ್ವ್ ಮಾಡಿದ ಆಟಗಾರ ಚೆಂಡು ನೆಟ್ ದಾಟುವ ಮುಂಚೆ ಅಂಕಣದೊಳಗೆ ಬರುವಂತಿಲ್ಲ. 
	ತಂಡ ಅಂಕ ಗಳಿಸುತ್ತಿರುವವರೆಗೂ ಸರ್ವಿಸ್ ಹಾಗೂ ಸ್ಕೋರುಗಳು ಮುಂದುವರಿಯುತ್ತವೆ. ಅಂಕ ಕಳೆದುಕೊಂಡ ಕೂಡಲೇ ಪಕ್ಕಬದಲಾವಣೆಯಾಗಿ ಎದುರಾಳಿ ತಂಡ ಸರ್ವಿಸ್ ಅವಕಾಶ ಪಡೆಯುತ್ತದೆ. ಇದಕ್ಕೆ ಅಂಕದ ಎಣಿಕೆಯಿಲ್ಲ. ನಿರ್ಣಾಯಕ ಸೆಟ್‍ನಲ್ಲಿ ಮಾತ್ರ ರ್ಯಾಲಿಯಾಗುತ್ತದೆ. ಪಂದ್ಯದಲ್ಲಿ ಒಬ್ಬ ರೆಫರಿ, ಒಬ್ಬ ಅಂಪೈರ್, ಒಬ್ಬ ಸ್ಕೋರರ್ ಮತ್ತು ಇಬ್ಬರು ಲೈನ್ ಅಂಪೈರ್‍ಗಳಿರುತ್ತಾರೆ. ಭಾರತದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಚಾಂಪಿಯನ್‍ಷಿಪ್‍ಗಳಲ್ಲದೇ, ಫೆಡರೇಷನ್ ಕಪ್, ಶಿವಂತಿ ಗೋಲ್ಡ್‍ಕಪ್ ಟೂರ್ನಿಗಳು ಈ ಕ್ರೀಡೆಯ ಪ್ರಮುಖ ಟೂರ್ನಿಗಳಾಗಿವೆ. ವಲ್ರ್ಡ್ ವಾಲಿಬಾಲ್ ಚಾಂಪಿಯನ್‍ಷಿಪ್ ಮತ್ತು ಒಲಿಂಪಿಕ್ ಕ್ರೀಡೆಗಳು ಈ ಆಟದ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಗಳು.						
	(ಡಿ.ಎನ್.ಎಸ್.; ಜಿ.ಎಚ್.)